ರಚನೆ: ಸರ್ವಜ್ಞ

ಆ ದೇವ ಈ ದೇವ ಮಾದೇವನೆನಬೇಡ
ಆ ದೇವರ ದೇವ ಭುವನ ಪ್ರಾಣಿಗಳಿ
ಗಾದವನೆ ದೇವ ಸರ್ವಜ್ಞ ||

ಹರ ತನ್ನೊಳಿರ್ದು ಗುರು ತೋಱದೇ ತಿಳಿವುದೇ
ಮರದೊಳಗ್ನಿಯಿರುತಿರ್ದು ತನ್ನ ತಾ
ನಱಿಯದೇಕೆಂದ ಸರ್ವಜ್ಞ ||

ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ
ಬಣ್ಣಿಸಿ ಬರೆವ ಪಟದೊಳಗೆ ಇರುವಾತ
ತನ್ನೊಳಗೆ ಇರನೆ ಸರ್ವಜ್ಞ ||

ಧ್ಯಾನದಾ ಹೊಸಬತ್ತಿ ಮೌನದಾ ತಿಳಿದುಪ್ಪ
ಸ್ವಾನುಭವವೆಂಬ ಬೆಳಗಿನಾ ಜೋತಿಯ
ಜ್ಞಾನವಂ ಸುಡುಗು ಸರ್ವಜ್ಞ ||

ಮನದಲ್ಲಿ ನೆನೆವಂಗೆ ಮನೆಯೇನು ಮಠವೇನು?
ಮನದಲ್ಲಿ ನೆನೆಯದಿರುವವನು ದೇಗುಲದ
ಕೊನೆಯಲಿದ್ದೇನು  ಸರ್ವಜ್ಞ ||

ಊರಿಂಗೆ ದಾರಿ ಯಾರು ತೋಱಿದೊಡೇನು
ಸಾರಾಯದಾ ನಿಜವ ತೋರುವ ಗುರುವು
ಯಾರಾದೊಡೇನು  ಸರ್ವಜ್ಞ ||

ಬಲ್ಲನೆಂಬುವ ಮಾತು ಎಲ್ಲವೂ ಹುಸಿ ಕಾಣೊ
ಬಲ್ಲರೆ ಬಲ್ಲೆನೆನಬೇಡ ಸುಮ್ಮನಿರ
ಬಲ್ಲವನೆ ಬಲ್ಲ ಸರ್ವಜ್ಞ ||

ವರ್ಗ: ಸರ್ವಜ್ಞನ ವಚನಗಳು
ವರ್ಗ: ವಚನ ಸಾಹಿತ್ಯ